ಕಡಲುದರೋಡೆ : ಸಾಮಾನ್ಯವಾಗಿ ಯಾವ ದೇಶದ ಹದ್ದಿಗೂ ಒಳಪಡದ ಸಮುದ್ರ ಪ್ರದೇಶದಲ್ಲಿ ಅನಧಿಕೃತವಾಗಿ ಹಡಗುಗಳ ಮೇಲೆ ನಡೆಸಿದ ದರೋಡೆ, ಹಿಂಸಾಕೃತ್ಯ (ಪೈರೆಸಿ).

ಕಡಲುದರೋಡೆಯ ಇತಿಹಾಸ ಸಮುದ್ರಯಾನದಷ್ಟೇ ದೀರ್ಘವಾದದ್ದು. ಮಾನವನ ಚರಿತ್ರೆಯ ನಾನಾ ಘಟ್ಟಗಳಲ್ಲಿ, ಬೇರೆ ಬೇರೆ ಪ್ರದೇಶಗಳಲ್ಲಿ, ಹೆಚ್ಚು ಕಡಿಮೆ ಪರಿಣಾಮಗಳಲ್ಲಿ ಇದರ ಹಾವಳಿ ಇದ್ದೇ ಇತ್ತು. ಗಗನಪಥದಲ್ಲಿ ಸಂಚರಿಸುತ್ತಿರುವ ವಿಮಾನದ ಚಾಲಕರಿಗೂ ಪ್ರಯಾಣಿಕರಿಗೂ ಬೆದರಿಕೆಯನ್ನೊಡ್ಡಿ ಅದರ ಉದ್ದಿಷ್ಟ ನೆಲೆ ತಪ್ಪಿಸಿ ಅದು ಬೇರೆಲ್ಲಿಗೋ ಹೋಗುವಂತೆ ಮಾಡುವ ವಿಮಾನಾಪಹರಣವೂ (ಹೈಜ್ಯಾಕಿಂಗ್) ಕಡಲು ದರೋಡೆಯ ಮಾದರಿಯೇ. ಆದರೆ ಅದರ ಉದ್ದೇಶ ಬೇರೆ ಇರಬಹುದು. ಕಡಲು ದರೋಡೆಗೆ ಇಂಗ್ಲಿಷ್ ಪರ್ಯಾಯ ಪದವಾದ ಪೈರೆಸಿಯೆಂಬುದರಲ್ಲಿ ವಿಮಾನಾಪಹರಣವೂ ಸೇರಿದೆ.

ಗ್ರೀಕ್ ಮತ್ತು ರೋಮನ್ ಆಧಿಪತ್ಯಗಳ ಕಾಲದಲ್ಲಿ ಮೆಡಿಟರೇಯನ್ ಸಮುದ್ರ ದರೋಡೆಯ ಕ್ಷೇತ್ರವಾಗಿತ್ತು. ಸಮುದ್ರವ್ಯಾಪಾರ ನಡೆಯುತ್ತಿದ್ದೆಡೆಯಲ್ಲೆಲ್ಲ ದರೋಡೆಯ ಅಂಜಿಕೆ ಆಗಿನ ಕಾಲದಲ್ಲಿ ಸಾಮಾನ್ಯವಾಗಿತ್ತು. ಹೋಮರನ ಒಡಿಸ್ಸಿಯಲ್ಲಿ ಕಡಲು ಸಂಚಾರಿಗಳ ಉಲ್ಲೇಖವಿದೆ. ಜ್ಯೂಲಿಯಸ್ ಸೀಸರ್ ಚಿಕ್ಕವನಿದ್ದಾಗ ದರೋಡೆಗಾರರಿಗೆ ಸೆರೆಸಿಕ್ಕಿದ್ದು, ಹಣ ಕೊಟ್ಟ ಮೇಲೆ ಅವನ ಬಿಡುಗಡೆಯಾಯಿತಂತೆ. ಅನಂತರ ಆತ ದಂಡೆತ್ತಿ ಹೋಗಿ ಆ ಹಡಗನ್ನಾಕ್ರಮಿಸಿಕೊಂಡು ಅದರ ಚಾಲಕರನ್ನೆಲ್ಲ ಸಿಲುಬೆಗೇರಿಸಿದನೆಂದು ಉಲ್ಲೇಖವಿದೆ. ಪ್ರಾಚೀನ ಭಾರತದ ಉತ್ಕರ್ಷೆಯ ಕಾಲದಲ್ಲಿ, ಅದು ನೆರೆಯ ಸಾಗರೋತ್ತರ ನಾಡುಗಳೊಡನೆ ವಾಣಿಜ್ಯಕ ಸಾಂಸ್ಕೃತಿಕ ಮತ್ತು ರಾಜಕೀಯ ಸಂಪರ್ಕ ಹೊಂದಿದ್ದಾಗಲೂ ಕಡಲ್ಗಳ್ಳರ ಹಾವಳಿ ಇದ್ದೇ ಇತ್ತು. ಮಧ್ಯಯುಗದಲ್ಲಿ ಯುರೋಪಿನ ಉತ್ತರದ ವೈಕಿಂಗರೂ ದಕ್ಷಿಣದ ಮೂರರೂ ಕಡಲುದರೋಡೆಯಲ್ಲಿ ನಿರತರಾಗಿದ್ದರು. ಪೌರಸ್ತ್ಯ ದೇಶಗಳಿಂದ ಕೊಂಡ ಸರಕುಗಳನ್ನು ಹೊತ್ತ ಹಡಗುಗಳು ದರೋಡೆಗೆ ಒಳಗಾಗುತ್ತಿದ್ದುದಂತೂ ಸಾಮಾನ್ಯವಾಗಿತ್ತು. 16ನೆಯ ಶತಮಾನದಲ್ಲಿ ವಾಣಿಜ್ಯವೂ ಕಡಲು ದರೋಡೆಯೂ ಒಟ್ಟೊಟ್ಟಿಗೇ ಬೆಳೆದು ಬಂದುವೆನ್ನಬಹುದು. ಅರಬೀಯರ ಕೈಯಲ್ಲಿದ್ದ ಈ ವ್ಯಾಪಾರವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವ ಸಲುವಾಗಿಯೇ ಯುರೋಪಿನ ರಾಷ್ಟ್ರಗಳು ಧಾರ್ಮಿಕ ಯುದ್ಧದ ಹೆಸರಿನಲ್ಲಿ ದರೋಡೆ ನಡೆಸಿದುವೆಂಬುದಕ್ಕೆ ಅನೇಕ ಚಾರಿತ್ರಿಕ ಆಧಾರಗಳುಂಟು. ಐರೋಪ್ಯ ರಾಷ್ಟ್ರಗಳ ಕೈಗಾರಿಕಾ ಕ್ರಾಂತಿಯ ಯಶಸ್ಸಿಗೆ ಅನುವಾಗಿ ಬಂದ ಬಂಡವಾಳ ವಾದರೂ ಕೊಳ್ಳೆ. ಕಡಲುದರೋಡೆ ಮುಂತಾದವುಗಳಿಂದಲೇ ಹೆಚ್ಚಾಗಿ ಬೆಳೆಯಿತೆಂಬುದು ಇತಿಹಾಸದಲ್ಲಿ ಗುರುತಿಸಬಹುದಾದ ಸತ್ಯ.

ಪುನರುಜ್ಜೀವನ ಕಾಲದಲ್ಲೂ ಅನಂತರದಲ್ಲೂ ಯುರೋಪಿನಲ್ಲಿ ಪದೇ ಪದೇ ಸಂಭವಿಸುತ್ತಿದ್ದ ಯುದ್ಧಗಳಲ್ಲಿ ಹಲವು ಹಡಗುಗಳು ನಾಶವಾಗುತ್ತಿದ್ದವು. ಇದರಿಂದ ಕೆಲಸ ಕಳೆದುಕೊಂಡ ನಾವಿಕರನ್ನು ದರೋಡೆಗಾರರು ತಮ್ಮತ್ತ ಸೆಳೆದುಕೊಳ್ಳುತ್ತಿದ್ದುದುಂಟು. ಅವರಿಗೆ ಸಂಬಳವಿರುತ್ತಿರಲಿಲ್ಲ. ಕೊಳ್ಳೆಗೆ ಒಳಗಾದ ಹಡಗಿನ ಸಂಪತ್ತಿನಲ್ಲಿ ಅವರಿಗೊಂದು ಭಾಗವಿರುತ್ತಿತ್ತು. ಪರಿಸ್ಥಿತಿಯ ಒತ್ತಡದಿಂದಲೋ ದರೋಡೆಗಾರರ ಕೈಯಿಂದ ಪ್ರಾಣವನ್ನುಳಿಸಿ ಕೊಳ್ಳುವುದಕ್ಕಾಗಿಯೋ ತಾವೂ ಈ ವೃತ್ತಿ ಅವಲಂಬಿಸಬೇಕಾಯಿತೆಂಬುದಾಗಿಯೇ ಅವರು ಸಿಕ್ಕಿಬಿದ್ದ ಸಂದರ್ಭದಲ್ಲಿ ಕೈಫಿಯತ್ತು ಕೊಟ್ಟಿರುವುದುಂಟು.

ಹಡಗಿನ ಪ್ರಯಾಣಿಕರಲ್ಲೇ ಕೆಲವರು ದಂಗೆಯೆದ್ದು, ವಿರೋಧಿಸುವ ಅಧಿಕಾರಿಗಳನ್ನೂ ಚಾಲಕ ಸಿಬ್ಬಂದಿಯನ್ನೂ ಕೊಂದು, ಅವರ ದೇಹಗಳನ್ನು ಕಡಲಿನ ಪಾಲು ಮಾಡಿ, ಹಡಗನ್ನು ಕೊಂಡೊಯ್ದು, ಸರಕುಗಳನ್ನೆಲ್ಲ ಕೊಳ್ಳೆ ಹೊಡೆದು ದೋಣಿಗಳಲ್ಲಿ ಪರಾರಿಯಾಗುತ್ತಿದ್ದುದೂ ಉಂಟು. ಇನ್ನೊಂದು ದೇಶದಿಂದಾದ ತಪ್ಪಿಗೆ ಮುಯ್ಯಾಗಿಯೋ ಶತ್ರುದೇಶಕ್ಕೆ ಪೆಟ್ಟು ತಾಗಿಸಲೋ ಸರ್ಕಾರವೇ ಖಾಸಗಿ ಒಡೆತನದ ಶಸ್ತ್ರಸಜ್ಜಿತ ಹಡಗಿಗೆ ಕಡಲುದರೋಡೆ ಮಾಡಲು ಅನುಜ್ಞೆ ಕೊಡುತ್ತಿದ್ದುದೂ ಸಾಮಾನ್ಯವಾಗಿತ್ತು. ಇದು ಬಲು ಲಾಭಪ್ರದ ಉದ್ಯಮವಾಗಿದ್ದುದರಿಂದ ಶಾಂತಿ ಕಾಲದಲ್ಲೂ ಮುಂದುವರಿಯುತ್ತಿತ್ತು. ರಾಣಿ ಎಲಿಜóಬೆತಳ ಕಾಲದಲ್ಲಿ, ಬ್ರಿಟನಿಗೂ ಸ್ಪೇನಿಗೂ ಯುದ್ಧ ನಡೆಯುತ್ತಿದ್ದಾಗ, ಮೆಕ್ಸಿಕೊದಿಂದ ಕ್ಯಾರಿಬಿಯನ್ ಪ್ರದೇಶಕ್ಕೆ ಸಾಗುತ್ತಿದ್ದ ಸಂಪದ್ಭರಿತ ಸ್ಪೇನಿಷ್ ಹಡಗುಗಳನ್ನು ಕೊಳ್ಳೆ ಹೊಡೆಯಲಾಗುತ್ತಿತ್ತು. ಈ ಬಗೆಯ ಖಾಸಗಿ ಸಾಹಸಕ್ಕೂ ದರೋಡೆಗೂ ನಡುವೆ ಗೆರೆ ಎಳೆಯವುದೇ ಕಷ್ಟವೆಂಬ ಪರಿಸ್ಥಿತಿ ಒದಗಿತು. ಶತ್ರುಹಡಗುಗಳನ್ನು ಕೊಳ್ಳೆ ಹೊಡೆದಾಗ ಅದರಲ್ಲೊಂದು ಭಾಗವನ್ನು ಬಹುಮಾನವಾಗಿ ನೌಕಾಪಡೆಯವರಿಗೆ ಕೊಡುವ ಪದ್ಧತಿಯಿಂದ ಆಗುತ್ತಿದ್ದ ಕೆಡುಕಂತೂ ಅಪಾರ. ವ್ಯಾಪಾರದ ಆಸೆಯಿಂದ ಪುರ್ವಪ್ರದೇಶಗಳಿಗೆ ಬಂದು ರಾಜ್ಯಕಟ್ಟುವ ಕಾರ್ಯದಲ್ಲಿ ನಿರತವಾಗಿ ಪರಸ್ಪರ ಹೋರಾಟಗಳಲ್ಲಿ ತೊಡಗಿದ ಐರೋಪ್ಯ ವ್ಯಾಪಾರ ಸಂಸ್ಥೆಗಳಲ್ಲಿನ ಕೆಲಸಗಾರರಿಗೆ ಕಡಲು ದರೋಡೆಯೂ ಒಂದು ಲಾಭಕರ ಹವ್ಯಾಸವೇ ಆಗಿ ಪರಿಣಮಿಸಿತ್ತು. ಶತ್ರುಗಳಿಗೆ ಸೇರಿದ ಹಡಗುಗಳನ್ನು ಹಿಡಿದು, ಆ ಕೆಲಸ ಮಾಡಿದ್ದಕ್ಕಾಗಿ ಬಹುಮಾನ ಕೊಡಬೇಕೆಂದು ಕೇಳಿಕೆ ಮುಂದಿಡುವ ನೌಕಾಧಿಕಾರಿಗಳ ಅಭ್ಯಾಸದಿಂದ ಸರ್ಕಾರಗಳು ಪೇಚಿಗೆ ಸಿಗುತ್ತಿದ್ದುದರಿಂದ ಈ ಪದ್ಧತಿಯನ್ನು ತೊಡೆದು ಹಾಕುವ ಕ್ರಮಗಳು ಕಳೆದ ಶತಮಾನದಲ್ಲೂ ಈ ಶತಮಾನದಲ್ಲೂ ಅನೇಕ ಪಾಶ್ಚಾತ್ಯದೇಶಗಳಲ್ಲಿ ಜಾರಿಗೆ ಬಂದುವು.

ಕಡಲು ದರೋಡೆ ಒಂದು ಅಪಕೃತ್ಯವೆಂದು ಇಂದು ಪರಿಗಣಿಸಲಾಗಿದೆ. ಯಾವ ದೇಶದ ಸಾರ್ವಜನಿಕ ಹಡಗೇ ಆಗಿರಲಿ ದರೋಡೆ ಹಡಗೊಂದನ್ನು ಕಂಡಾಗ ಅದನ್ನು ಹಿಡಿದು, ಬಂದರಿಗೆ ಕರೆದೊಯ್ದು, ಅದರ ಸಿಬ್ಬಂದಿಯವರು ಯಾವ ರಾಷ್ಟ್ರದವರೇ ಆಗಿದ್ದರೂ ಅವರನ್ನು ವಿಚಾರಣೆಗೆ ಗುರಿಪಡಿಸಿ, ಅವರು ತಪ್ಪಿತಸ್ಥರೆಂದು ಕಂಡು ಬಂದರೆ ಶಿಕ್ಷಿಸಿ ಹಡಗನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ರಾಜಕೀಯ ದ್ವೇಷವಿಲ್ಲದೆ ಸ್ವಂತ ಲಾಭಕ್ಕಾಗಿ ದರೋಡೆ ಮಾಡುವವರು ಮಾನವ ಜನಾಂಗದ ಶತ್ರುಗಳೆಂದು ಭಾವಿಸಲಾಗಿದೆ. ಹಡಗು ದರೋಡೆಗೆ ಮರಣದಂಡನೆ ಅಥವಾ ಅಜೀವ ಕಾರಾಗೃಹ ಶಿಕ್ಷೆ ವಿಧಿಸುವ ಕಾನೂನುಗಳು ಅನೇಕ ರಾಷ್ಟ್ರಗಳಲ್ಲಿ ಜಾರಿಯಲ್ಲಿವೆ. ಕಾನೂನುಬಾಹಿರ ಯುದ್ಧ, ಬಂಡಾಯ, ಹಡಗು ದರೋಡೆ, ಗುಲಾಮ ವ್ಯಾಪಾರ ಇವೆಲ್ಲವೂ ಏಕರೀತಿಯ ಅಪರಾಧಗಳೆಂದು ವಿಶೇಷ ಅಂತಾರಾಷ್ಟ್ರೀಯ ಕೌಲುಗಳ ಮೂಲಕ ಪರಿಗಣಿಸಲಾಗಿದೆ. ಎಚ್ಚರಿಕೆ ನೀಡದೆ ವ್ಯಾಪಾರದ ಹಡಗುಗಳನ್ನು ಜಲಾಂತರ್ಗಾಮಿ ನೌಕೆಗಳಿಂದ ನಾಶಪಡಿಸುವುದು ಹಡಗುದರೋಡೆಯಂತೆಯೇ ಅಪರಾಧವೆಂದು ಪರಿಗಣಿಸಬೇಕೆಂದೂ ಅಂಥವನ್ನು ನಾಶಪಡಿಸಬೇಕೆಂದೂ ಒಡಂಬಡಿಕೆಯಿರುವುದಾದರೂ ಈ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳುವುದು ಸಾಧ್ಯವಿಲ್ಲ. ಏಕೆಂದರೆ ಜಲಾಂತರ್ಗಾಮಿ ನೌಕೆಗಳು ಈ ಬಗೆಯ ಕಾರ್ಯದಲ್ಲಿ ತೊಡಗುವುದು ಸಾಮಾನ್ಯವಾಗಿ ಯುದ್ಧ ಸಂದರ್ಭಗಳಲ್ಲಿ; ಸರ್ಕಾರದ ಆದೇಶವಿದ್ದಾಗ ಮಾತ್ರ.                                                   (ಐ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ